Wednesday, November 18, 2009

ಉತ್ತರ ಕರ್ನಾಟಕದಲ್ಲೂ ಕರ್ನಾಟಕವಿದೆ !!

ಉತ್ತರ ಕರ್ನಾಟಕದಲ್ಲೂ ಕರ್ನಾಟಕವಿದೆ !!
( Article Incomplete )



ಹಾಂ. ಉತ್ತರ ಕರ್ನಾಟಕದಲ್ಲೂ ಕರ್ನಾಟಕವಿದೆ. ನನ್ನ ಮಾತು ನಿಜ ತಾನೆ ? 

ಶಬ್ದಶಃ ವೂ ಇದೆ. ಭೌತಿಕವಾಗಿಯೂ ಇದೆ. ಆಡಳಿತ ಕಾರಣವಾಗಿಯೂ ಇದೆ. ಜನಮಾನಸದಲ್ಲೂ ಇದೆ. ಈ ಇದೆ ... ಇದೆ..ಗಳ ನಡುವೆ ಆ ಪ್ರದೇಶದ ಅಭಿವೃದ್ಧಿ ಎಲ್ಲಿ ಮಾಯವಾಗಿದೆ ಅನ್ನೋದು ನನ್ನ ಪ್ರಶ್ನೆ.

ಈ ಬರಹವನ್ನ ಬರೆತಿರೋ ನಾನೂ ಒಬ್ಬ ಉತ್ತರದ ಕನ್ನಡಿಗ. ಇದನ್ನ ಬರೆಯೋ ಉದ್ದೇಶ ದಕ್ಷಿಣದವರನ್ನ ದೂರುವುದಲ್ಲ. ಇದೊಂಥರಾ ವಿಮರ್ಶೆ ಅನ್ನಿ. ಆತ್ಮ ವಿಮರ್ಶೆ ಅಂದರೂ ಆದೀತು. ಶುರು ಮಾಡೋಣಾ ?

ಉತ್ತರ ಕರ್ನಾಟಕದ ನಿವಾಸಿಗಳಲ್ಲಿ ಬುದ್ಧಿ ಪ್ರಬುದ್ಧರು ಅನ್ನಿಕೊಂಡವರಲ್ಲಿ ಅನೇಕರು ಆವಾಗವಾಗ " ನಮ್ಮ ಪ್ರದೇಶದ ಅಭಿವೃದ್ಧಿಗೆ ಆಗಿರುವ ತಾರತಮ್ಯ ಸುಧಾರಣೆ ಯಾವಾಗ ? ಆ ಅಪ್ಪನ ವರದಿ ಅನುಷ್ಠಾನ ಮಾಡಿ ಈ ಅಪ್ಪನ ವರದಿ ಅನುಷ್ಠಾನ ಮಾಡಿ..." ಅಂತ ಗೋಗರೆಯೋ ಸುದ್ದಿ ನಿಮ್ಮ ಕಿವಿಗೂ ತಲುಪಿರೋದಕ್ಕೆ ಸಾಧ್ಯ ಇದೆ. ಬುದ್ಧಿ ಪ್ರಬುದ್ಧರನ್ನ ಬಿಟ್ರೆ ಈ ವೇದಿಕೆಯಲ್ಲಿ ಕಾಣಸಿಗೋರು ರಾಜಕಾರಣಿಗಳು ಮಾತ್ರ. ಈ ಪ್ರದೇಶದ ಕಾಳಜಿ ಇದೆಯಲ್ಲಾ ಅದು ಪಕ್ಷಾತೀತ. ಪಕ್ಷಭೇದ ಅರಿಯದೇ  ಆಸಕ್ತಿ ತೋರಿಸುವ ಅತಿ ವಿರಳ ವಿಷಯಗಳಲ್ಲಿ ಇದೂ ಒಂದು. ಪಕ್ಷಾತೀತ ಏನಕ್ಕೆ ಅಂದ್ರೆ... ಅಭಿವೃದ್ಧಿಗೆ ಅಲವತ್ತುಕೊಳ್ಳುವ ವ್ಯಕ್ತಿ ವಿರೋಧ ಪಕ್ಷದಲ್ಲಿದ್ದರೆ ಆಡಳಿತ ಪಕ್ಷದ ವಿರುದ್ಧ ಸಮರ ಸಾರಿ ಪ್ರದೇಶಾಭಿವೃದ್ಧಿ ನಿಧಿಯನ್ನ ಭಗೀರಥನಂತೆ ತನ್ನ ಮನೆಯ ಆಸುಪಾಸಿನಲ್ಲಿ ಹರಿಸಿದ ಪ್ರಯತ್ನಗಳಿಗೇನು ಕೊರತೆ ಇಲ್ಲ ತಾನೇ ? ............... " ಇಂಥ ಸ್ವಾರ್ಥ ಜಗತ್ತಿನಲ್ಲಿ 5 ಹಳ್ಳಿ ಉದ್ಧಾರ ಆಗುವ ನಿಧಿಯಲ್ಲಿ 5 ಎಕರೆ ಜಾಗವಾದರೂ ಅಭಿವೃದ್ಧಿ ಆಯ್ತಲ್ಲಾ !! ಅವರ ಮನೆಯೂ ಉತ್ತರ ಕರ್ನಾಟಕದಲ್ಲೇ ಇದೆ ತಾನೆ ? ಸಾಕು ಬಿಡಿ.."  ಅನ್ನೋ ಕಕ್ಕುಲಾತಿ ನಮ್ಮ ಉತ್ತರ ಕನ್ನಡಿಗರದು. ಹಿಂದೆ ಕಾವ್ಯಗಳಲ್ಲಿ ಕವಿಗಳು ಹೊಗಳಿದ ಈ ಪ್ರದೇಶದ ಜನರ ಔದಾರ್ಯತೆ ಇನ್ನೂ ಜಾರಿಯಲ್ಲಿರೋದು ಆಶ್ಚರ್ಯ ಆದರೂ ಸತ್ಯ !! ಇನ್ನು ಆ ರಾಜಕಾರಣಿ ಆಡಳಿತ ಪಕ್ಷದಲ್ಲಿದ್ದರೆ ... ಅದರ ಚರ್ಚೆ ಬೇಡ ಬಿಡಿ. ಅದು ಚರ್ಚೆ ಮಾಡುವ ವಿಷಯವೇ ಅಲ್ಲ. ಅಷ್ಟು ನಿಚ್ಚಳವಾಗಿರುವ 'ನಿತ್ಯ ಸತ್ಯ' !!!!! ಈ ಮೂವರನ್ನ ಬಿಟ್ರೆ ಈ ಪ್ರದೇಶದ ಅಭಿವೃದ್ಧಿಗೆ ದನಿ ಎತ್ತುವವರೇ ಇಲ್ಲ ಅನ್ನೋದು ನಗ್ನ ಸತ್ಯ. ಈಗ ಹೇಳಿ : ಯಾರು ಹಿತವರು ಈ ಮೂವರೊಳಗೆ ?

ಈಗ ದಕ್ಷಿಣ ಪ್ರದೇಶದ ಅಭಿವೃದ್ಧಿ ವಿಷಯಕ್ಕೆ ಬರೋಣ. ಅದು ಅಭಿವೃದ್ಧಿ ಹೊಂದಿದ ಪ್ರದೇಶ ಅಂದುಕೊಂಡಿರಾ ? ಅಲ್ಲೂ ಇದೇ ಹಣೆ ಬರಹ. ಅಲ್ಲಿನ ಹಳ್ಳಿಗಳಿಗೂ ಇಲ್ಲಿನ ಹಳ್ಳಿಗಳಂತೆ ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ಬಡತವರಿಗೆ ವಸತಿ ಸಮಸ್ಯೆ, ... ಅವರಿಗೂ ಈ ಮೇಲಿನ ಮೂವರೇ ಗತಿ. ಆದರೆ ಪ್ರಕೃತಿ ಅವರ ಮೇಲೆ ಕೊಂಚ ಕರುಣೆ ತೋರಿದಾಳೆ. ಗಿಡಮರಗಳ ಸುಪುಷ್ಟಿಯ ಜೊತೆಗೆ ನದನದಿಗಳನ್ನೂ ಕರುಣಿಸಿದ್ದಾಳೆ. ಆ ಒಂದು ಬಲದ ಮೇಲೆ ರೈತ ಸ್ವಾವಲಂಬಿಯಾಗಲು ತನ್ನ ಕಾಲ ಮೇಲೆ ತಾನು ನಿಲ್ಲಲು ಅನುಕೂಲಕರ ವಾತಾವರಣವಿದೆ ( ಆದರೆ, ಅಲ್ಲಿಯ ಎಷ್ಟು ರೈತರು ಇದನ್ನ ಬಳಸಿಕೊಂಡಿದಾರೆ ಅನ್ನೋ ಲೆಕ್ಕ ಇಲ್ಲ, ನನ್ನ ಹತ್ತಿರ. ) ಪ್ರಕೃತಿಯ ಕೃಪೆ ಬಿಟ್ಟರೆ ಅವರದೂ ನಮ್ಮ ಸಮಸ್ಯೆಗಳ ದಾರಿಯಲ್ಲೇ ನಡೆಯುವ ಕರ್ಮ. ಅದರ ಬಗ್ಗೆ ದಕ್ಷಿಣದ ಕನ್ನಡಿಗನೊಬ್ಬ ಬರೆಯಲಿ ಬಿಡಿ. ಅವರಿಗೂ ನಮ್ಮವೇ ಸಮಸ್ಯೆಗಳಿದ್ದಾಗ ನಾವೇಕೆ ( ಉತ್ತರದ ಕನ್ನಡಿಗರು ) ಅಲವತ್ತುಕೊಳ್ಳಬೇಕು ? ರಾಜ್ಯವನ್ನ ಎರಡು ಭಾಗ ಮಾಡಿ, ನಮ್ಮ ಕಡೆ ಗಮನ ಕೊಡಿ ಅಂತ ಅರಚಾಡಬೇಕು ? ಈ ಪ್ರಶ್ನೆಗಳಿಗೆ ಉತ್ತರ ಇದೆಯಾ ?


ಈಗ ಭೌಗೋಳಿಕ ಸನ್ನಿವೇಶದ ವ್ಯತ್ಯಾಸವೊಂದನ್ನೇ ಮಾನದಂಡವಾಗಿಟ್ಟುಕೊಂಡು ದಕ್ಷಿಣದ ಭಾಗದಲ್ಲಿ ಅಲ್ಲಲ್ಲಿ ಸ್ಥಾಪನೆಗೊಂಡಿರುವ ಕೈಗಾರಿಕೆಗಳನ್ನೇ ಬೆರಳು ಮಾಡಿ ತೋರಿಸುವುದಾದರೆ .....ನಮ್ಮ ಭಾಗದಲ್ಲಿನ ಭೌಗೋಳಿಕ ಸನ್ನಿವೇಶ ಹೊಸ ಹೊಸ ಕೈಗಾರಿಕೆಗಳಿಗೆ ನೀರು ವಿದ್ಯುತ್ ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನ ಪೂರೈಸಲು ಶಕ್ಯವಿಲ್ಲ ಅನ್ನೋ ವಾದವಿದ್ದರೆ ಕೈಗಾರಿಕೆಗಳನ್ನ ಹೊರತು ಪಡಿಸಿ ಈ ಭೂಪ್ರದೇಶಕ್ಕೆ ಭವಿಷ್ಯವೇ ಇಲ್ಲವೇ ? ಉದ್ಯೋಗ, ಹಣ... ಇವೆಲ್ಲವನ್ನ ನೀಡಲು ಅದೊಂದೇ ಮಾರ್ಗವಾಗಬೇಕೆ ?

ಭಾರತ ಸ್ವತಂತ್ರವಾದಾಗಿನಿಂದ ಇಲ್ಲಿಯವರೆಗೆ ಇಲ್ಲಿನ ಭೂಪ್ರದೇಶಕ್ಕೆ ಇಂತಿಷ್ಟು ಜನಸಂಖ್ಯೆಗೆ ಒಬ್ಬ ಪ್ರತಿನಿಧಿ ಅಂತ ಹೇಳಿ MP. MLA ಗಳನ್ನ ಆರಿಸುತ್ತಾ ಬಂದಿದೀವಿ. ಆ ಅನುಪಾತ ಉತ್ತರ ಕರ್ನಾಟಕಕ್ಕೂ ಅಷ್ಟೇ ಇದೆ. ದಕ್ಷಿಣ ಕರ್ನಾಟಕಕ್ಕೂ ಅಷ್ಟೇ ಇದೆ. ಜೊತೆಗೆ ಸಂಪೂರ್ಣ ಬಾರತಕ್ಕೂ ಕೂಡ. ಹೀಗಿರುವಾಗ ದಕ್ಷಿಣದ ಕಡೆ ಇರುವ ತಕ್ಕ ಮಟ್ಟಿನ ಸೌಕರ್ಯಗಳು ಉತ್ತರದ ಕಡೆ ಏಕಿಲ್ಲ ? ಅಂತ ವಿಚಾರ ಮಾಡಿದ್ರೆ ನಮ್ಮೊಳಗಿನ ನಮ್ಮವನೇ ಆದ ಜನಪ್ರತಿನಿಧಿ ನಮಗೇ ಮೋಸ ಮಾಡಿದನಾ ಅನ್ನೋ ಪ್ರಶ್ನೆ ಕಾಡದೇ ಇರೋದಿಲ್ಲ. ಎಲ್ಲಕ್ಕೂ ಬೆಂಗಳೂರಿನಲ್ಲಿರುವ ಸರ್ಕಾರವನ್ನೇ ದೂರುವ ಮೊದಲು ಅಲ್ಲಿ ಕೂತಿರುವ ಅಧಿಕಾರವರ್ಗದಲ್ಲಿ ನಮ್ಮ ಕಡೆಯವರು ಎಷ್ಟು ಜನ ಇದಾರೆ ಅನ್ನೋದನ್ನ ನಾವು ಚಿಂತಿಸಬೇಕಿದೆ. ಜಂಭಕ್ಕೆ ಹೇಳಿಕೊಳ್ಳುವಾಗ " ಹೇ... ವಿಧಾನಸೌಧನ್ಯಾಗ ನಮ್ಮ ಕಡಿ ಮಂದಿನೇ ಅರ್ಧಕ್ಕರ್ಧ ಇದಾರಪಾ... ಅಲ್ಲಿ ಹೋಗ ನೀ.. ನಮ್ಮ ಕಡಿ ಭಾಷಾ ಮಾತ್ಯಾಡೋರು ಎಷ್ಟೊಕೊಂದು ಮಂದಿ ಸಿಗತಾರ ...." ಅಂತೆಲ್ಲ ಹೇಳ್ತೀವಿ. ಆದರೆ ಇತರೆಯವರು ಮಾಡುವ ಸ್ವಜನಪಕ್ಷಪಾತ ಮಾಡದಷ್ಟು ನಮ್ಮೂರಿನ ಕಡೆಯ ಅಧಿಕಾರಿಗಳು ಮುಗ್ಧ / ಪ್ರಾಮಾಣಿಕ ರಾ ?

No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/